ಕ್ಯಾಥೋಡ್	

ಸಾಮಾನ್ಯವಾಗಿ, ಒಂದು ವಿದ್ಯುದುಪಕರಣದಲ್ಲಿ ಧನವಿದ್ಯುತ್ ಪ್ರವಾಹ ಹೊರಬೀಳುವ ಎಲೆಕ್ಟ್ರೋಡ್, ವಿದ್ಯುತ್ಕೋಶದಲ್ಲಿ ಇದು ಧನವಿದ್ಯುಚ್ಛಕ್ತಿಯ ಕೊನೆ. ಎಲೆಕ್ಟ್ರಾನ್ ನಳಿಕೆಗಳಲ್ಲಿದ್ದಾಗ ಈ ಎಲೆಕ್ಟ್ರೋಡ್ ಮೂಲಕವೇ ಪ್ರಾಥಮಿಕವಾಗಿ ಉದ್ಭವವಾದ ಎಲೆಕ್ಟ್ರಾನುಗಳು ಹೊರಬರುತ್ತವೆ. ಎಲೆಕ್ಟ್ರೋಪ್ಲೇಟಿಂಗ್ ಕೋಶದಲ್ಲಿ ಕ್ಯಾಥೋಡ್ ಮೂಲಕ ಎಲೆಕ್ಟ್ರಾನುಗಳು ಕೋಶದ ಒಳಗಡೆ ಬರುತ್ತವೆ ಮತ್ತು ಧನವಿದ್ಯುದಾವಿಷ್ಟ ಅಯಾನುಗಳು ಇದರ ಬಳಿ ವಿಸರ್ಜನೆಯಾಗುತ್ತವೆ. ನಿರ್ವಾತ ನಳಿಕೆಗಳಲ್ಲಿ ಹಲವಾರು ವಿಧವಾದ ಕ್ಯಾಥೋಡುಗಳನ್ನು ಎಲೆಕ್ಟ್ರಾನುಗಳ ಉತ್ಪತ್ತಿಗೆ ಉಪಯೋಗಿಸುತ್ತಾರೆ. ಮಾಸ್ ಸ್ಪೆಕ್ಟ್ರೋಮೀಟರಿನಲ್ಲಿ ಎಲೆಕ್ಟ್ರಾನುಗಳನ್ನು ಒದಗಿಸಲು ಉಪಯೋಗಿಸುವ ಕ್ಯಾಥೋಡಿಗೆ ಉಷ್ಣದ ಅವಶ್ಯಕತೆಯಿಲ್ಲವಾದ್ದರಿಂದ ಅದನ್ನು ತಣ್ಣನೆಯ ಕ್ಯಾಥೋಡ್ ಎಂದು ಕರೆಯಬಹುದು. ಎಲೆಕ್ಟ್ರಾನ್ ನಳಿಕೆಗಳಲ್ಲಿ ಉಪಯೋಗಿಸುವ ಉಷ್ಣ ಅಯಾನಿಕ ಕ್ಯಾಥೋಡುಗಳನ್ನು ನೇರವಾಗಿಯೋ ಪರೋಕ್ಷವಾಗಿಯೋ ಕಾಯಿಸಿ ಎಲೆಕ್ಟ್ರಾನುಗಳನ್ನು ಬಿಡುಗಡೆ ಮಾಡಬೇಕಾಗುತ್ತದೆ. ಈ ಕಾರ್ಯಕ್ಕೆ ವಿದ್ಯುತ್ತನ್ನು ಕ್ಯಾಥೋಡಿನಲ್ಲಿ ಹರಿಸಿದರೆ ಅದನ್ನು ಆಗ ಫಿಲಮೆಂಟ್ ಎಂದು ಕರೆಯುತ್ತಾರೆ. ಕೆಲವು ಸಂದರ್ಭಗಳಲ್ಲಿ ಎಲೆಕ್ಟ್ರಾನುಗಳು ಸುಲಭವಾಗಿ ಬಿಡುಗಡೆ ಮಾಡುವಂಥ ವಸ್ತುಗಳನ್ನು ಕ್ಯಾಥೋಡಿಗೆ ಲೇಪಿಸಿದ್ದರೆ ಅದನ್ನು ಲೇಪಿಸಿದ ಕ್ಯಾಥೋಡ್ ಎಂದು ಕರೆಯಬಹುದು. ಆಗ ಅತಿನೇರಿಳೆ ಅಥವಾ ದೃಗ್ಗೋಚರ ಕಿರಣಗಳಿಂದ ಎಲೆಕ್ಟ್ರಾನುಗಳನ್ನು ಬಿಡುಗಡೆ ಮಾಡಿದರೆ ಅದು ಬೆಳಕು ಕ್ಯಾಥೋಡ್ (ಫೋಟೋಕ್ಯಾಥೋಡ್) ಆಗುತ್ತದೆ. 	       (ಡಿ.ಎಸ್.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ